Saturday, February 9, 2019

ಪ್ರಕೃತಿಯ ಹಸಿರು ಸರಮಾಲೆ - ಕ್ಯಾತನಮಕ್ಕಿ

೨೦೧೮ ರ ಕ್ರಿಸ್ಮಸ್ ಮಂಗಳವಾರದಂದು ಬಂದಿತ್ತು , ಮಂಗಳವಾರ ರಜೆ ಎಂದರೆ ನನ್ನಂತಹ ಬೈಕ್ ಸವಾರಿ ಯಲ್ಲಿ ರುಚಿ ಇರುವವನಿಗೆ ಸಂಭ್ರಮ , ಸೋಮವಾರದ ದಿನ ರಜೆ ತೆಗೆದರೆ ೪ ದಿನದ ರಜೆ ಲಾಂಗ್ ವೀಕೆಂಡ್ ನ ಮೋಜು .

ಈ ನಾಲ್ಕು ದಿನಗಳಲ್ಲಿ ಎಲ್ಲಿಗೆ ಹೋಗೋಣ ಎಂದು ಯೋಚಿಸುತ್ತಿದ್ದೆ ಆಗ ಫೇಸ್ಬುಕ್ ನಲ್ಲಿ ನನ್ನ ತಂಗಿಯ ಸ್ನೇಹಿತ ನೋರ್ವ ಹೋದ ಕ್ಯಾತನಮಕ್ಕಿ ಎಂಬ ಜಾಗದ ಬಗ್ಗೆ ತಿಳಿದೆ.ಹೊರನಾಡಿನ ಬಳಿ ಇಂತಹ ರಮಣೀಯ ವಾದ ಸ್ಥಳ ವಿದೆ ಎಂದು ತಿಳಿದು ಖಷಿಯಾಯಿತು , ಅಲ್ಲಿಗೆ ಹೋಗೋಣ ಹಾಗೆ ಕುಂದಾದ್ರಿ ಬೆಟ್ಟದ ರಮಣೀಯ ಸೂರ್ಯೋದಯ ಹಾಗೂ ವಾರಾಹಿ ಅಣೆಕಟ್ಟು ನ್ನು ನೋಡಿಬರೋಣ ಎಂದು ನಿರ್ಧರಿಸಿದೆ. ಜಾಗಗಳನ್ನು ನಿರ್ಧರಿಸಿ ಸ್ನೇಹಿತರಲ್ಲಿ ಯಾರು ಬರುವಿರಿ ಎಂದು ಕೇಳಲು ಲಿಗಮೆಂಟ್ ಹರಿದು ಶಸ್ತ್ರಚಿಕಿತ್ಸೆ ಗೆ ಒಳಗಾಗಿ ಸುಮಾರು ೧ ವರುಷ ಗಾಡಿ ಚಾಲನೆಯನ್ನು ನಿಲ್ಲಿಸಿದ್ದ ಸ್ನೇಹಿತ ಅರುಣ್ ಬರಲು ಒಪ್ಪಿದ ಆದರೆ ಅವನು ಶನಿವಾರದ ದಿನ ಕೆಲಸಕ್ಕೆ ಹೋಗಬೇಕಾಗಿದ್ದ ಕಾರಣ ನಾವು ೩ ದಿನದ ಪ್ರಯಾಣವನ್ನು ಎರಡೇ ದಿನಕ್ಕೆ ನಿಶ್ಚಯ ಮಾಡಿದೆವು. ಭಾನವಾರದಂದು ಮುಂಜಾನೆ ೬.೩೦ ಕ್ಕೆ ಬೆಂಗಳೂರು ನಿಂದ ಹೊರಟೆವು.ಬೆಂಗಳೂರಿನಿಂದ ಬೇಲೂರು ಮೂಡಿಗೆರೆ ಮಾರ್ಗವಾಗಿ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮ ನ ದೇವಾಲಯದ ತೊಪ್ಪಾಲಲ್ಲಿ ಇರುವ ಕ್ಯತನಮಕ್ಕಿ ಗುಡ್ಡ ಶ್ರೇಣಿಯ ಬಳಿ ಬಂದೆವು. 



ಬೆಂಗಳೂರಿನಿಂದ ಕೊಟ್ಟಿಗೆಹಾರದ ತನಕ ರಸ್ತೆ ಸುಗಮವಾಗಿದೆ ತದ ನಂತರ ತಿರುವು ಮುರುವು ಉಳ್ಳ ರಸ್ತೆಗಳು , ರಸ್ತೆಯ ಇಕ್ಕೆಲಗಳಲ್ಲೂ ದಟ್ಟ ಕಾಡು ಗಮನ ರಸ್ತೆಯ ಮೇಲೋ ಪ್ರಕೃತಿಯ ಮೇಲೋ ಎಂಬುದೆ ತಿಳಿಯಲಾಗದು. ಅಲ್ಲಿಂದ ಕ್ಯತನಮಕ್ಕಿಯ ತೊಪ್ಪಲಿಗೆ ಬಂದೆವು , ಇಲ್ಲಿಂದ ಸುಮಾರು ೫ ಕಿಲೋಮೀಟರ್ ಹರಕಲು ರಸ್ತೆ , ಅಲ್ಲಿದ್ದ ಜನರು "ಬೈಕ್ ನಲ್ಲಿ ಹೋಗಲು ಸಾಧ್ಯವಿಲ್ಲ ಸರ್ , ಜೀಪ್ ನಲ್ಲಿ ಹೋಗಿ" ಎಂದರು , ನಾವು ಬೈಕ್ ನಲ್ಲೆ ಹೋಗಲು ನಿರ್ಧರಿಸಿ ಹೊರಟೆವು , ಮೊದಲು ಸ್ವಲ್ಪ ತೊಂದರೆಯಾದರು ಒಮ್ಮೆ ಗುಡ್ಡದ ಮೇಲೆ ತಲುಪಿದ ಮೇಲೆ ಎಲ್ಲಾ ತೊಂದರೆ ಮರೆತು ಹೋಯಿತು , ಆಹ್ ಹಾ ಎಂತ ರಮಣೀಯ ತಾಣ , ಕಣ್ಣು ಹಾಯಿಸಿದಷ್ಟು ದೂರ ಹಸಿರು ಮೈ ತುಂಬಿಕೊಂಡ ಪರ್ವತ ಶ್ರೇಣಿಗಳು , ಇದನ್ನು ನೋಡಿದ ನಾವೇ ಧನ್ಯ.






ಅಲ್ಲಿಂದ ನಮ್ಮ ಸವಾರಿ ಆಗೊಂಬೆ ಕಡೆ ಹೊರಟಿತು , ಆಗೊಂಬೆಯ ಮಲ್ಯ ರೆಸಿಡೆನ್ಸಿ ಎಂಬ ಲಾಡ್ಜ್ ನಲ್ಲಿ ರೂಮನ್ನು ಮಾಡಿದೆವು , ಮರು ದಿನ ಮುಂಜಾನೆ ೫ ಗಂಟೆಗೆ ಎದ್ದು ಕುಂದದ್ರಿಯ ಸೂರ್ಯೋದಯ ವನ್ನು ನೋಡಲು ಹೊರಟೆವು , ಮೈ ಜುಮ್ಮ್ ಎನ್ನುವ ಚಳಿ ,  
ಸುಮಾರು ೫.೩೦ ಇಂದ ಸೂರ್ಯೋದಯವನ್ನು ಕಾಯುತ್ತಾ ಕುಳಿತೆವು , ಸುಮಾರು ೬.೧೫ ವೇಳೆ ಆದಿತ್ಯನು ಮೋಡಗಳನ್ನು ಬೇಧಿಸಿ ಉದಿಸಿದ , ನೋಡಲು ಎರಡು ಕಣ್ಣುಗಳು ಸಾಲದು. ಅಲ್ಲಿಂದ ನಾವು ಮಾಣಿ ಜಲಾಶಯಕ್ಕೆ ಹೊರಟೆವು , ಆದರೆ ಬಹಳ ಹೊತ್ತಾಗಿತ್ತು ಅದಕ್ಕಾಗಿ ಮಾಣಿ ಜಲಾಶಯದ ತನಕ ಹೋಗದೆ ಬೆಂಗಳೂರಿನ ಕಡೆ ಹೊರಟೆವು. ಸುಮಾರು ಸಂಜೆ  ೬ ಗಂಟೆ ಯ ವೇಳೆ ಮನೆ ತಲುಪಿದವು.







ನಿಮಗೆ ಈ ಪ್ರವಾಸ ಕಥನ ಇಷ್ಟವಾಯಿತು ಎಂದು ನಂಬುತ್ತೇನೆ. ಎಲ್ಲಾ ಫೋಟೋ ಗಳನ್ನು CANON 77D ಯಲ್ಲಿ ತೆಗೆದದ್ದು. ಇನ್ನೊಂದು ಪ್ರವಾಸ ಕಥನ ದೊಡನೆ ನಿಮ್ಮನ್ನು ಕಾಣುತ್ತೇನೆ , ಅಲ್ಲಿಯವರೆಗೆ  ದೇವರು ನಿಮ್ಮೊಂದಿಗೆ ಇರಲಿ.

ಇಂತಿ
ಸಂತೋಷ್